Showing posts with label ಕವಿತೆ. Show all posts
Showing posts with label ಕವಿತೆ. Show all posts

Friday, December 11, 2015

ಮಲ್ಲಿಗೆಯೇ



ಬೆಳದಿಂಗಳೇ 
ಚಂದಿರನ ಮಡಿಲ ಮಲ್ಲಿಗೆಯೇ 
ಬೆಳಕ ಸುವಾಸನೆಯ ಚೆಲ್ಲೇ ..
ಘಮಿಸುವ ನಿನ್ನ ತಂಗಾಳಿಯ ..
ಮಿಂದ  ಚರ್ಮವ ಬೆಳಗಿಸೆ..
ನಿನ್ನ ಹತ್ತಿರ ಎನ್ನ ಸೆಳೆದು 
ಪಿಸುಮಾತ ಹಸಿವನು ಇಂಗಿಸೆ.. 
ನರ್ತಿಸೆ ನನ್ನೊಡೆ ..
ಹಸಿದು ಹಿಡಿಯೆ ನನ್ನ ಕೊರಳ ..
ಮಂದವಾಗದ ಬೆಳಕ ನೀ ಚೆಲ್ಲೇ ..
ರವಿಯ ಮೊದಲ ಕಿರಣದೊರೆಗೂ 
ದೂರ ಬಹುದೂರ ತೇಲಿಸೇ ನನ್ನ ..
ಆಲಿಂಗನದ ಬಲದಿ 
ತೊದಲ ನುಡಿಯ ದಣಿಸೆ ..
ಮುದ್ದಿಸೆ ಮಂದಹಾಸಿನಿಯೇ ..
ಬುವಿಗೆ ಹೊದಿಕೆಯ ನೀಡೆ .. 
ಮತ್ತೆ ಬಾರೆ ಬೆಳದಿಂಗಳೇ ..
ಮತ್ತೆ ಬಾರೆ ಒಳ ಬೆಳಕೆ  ..

- ಅಮರ ಕೆ ಜಿ ಕಾನುಗೋಡು 

Thursday, December 10, 2015

-- ಅಧಮ್ಯ --



ಕನಸೊಂದೆ ನಮ್ಮಿಬ್ಬರಿಗೂ ..
ಹೊಡೆದಾಟವೂ ಒಟ್ಟಿಗೇ ..

ಜಗದ ಪರಿಪಾಟವ
ಕಲಿತೆವು ಒಬ್ಬರಿಗೊಬ್ಬರಿಂದ

ನಕ್ಕೆವು .. ಅತ್ತೆವು
ಒಟ್ಟೊಟ್ಟಿಗೆ ..

ಇಬ್ಬರ ಅಭಿಲಾಷೆಯೂ
ಇನ್ನೊಬ್ಬರ ಅಭಿವೃದ್ದಿ

ಇಬ್ಬರೂ ಗೆದ್ದೆವು
ಇಬ್ಬರೂ ಸೋತೆವು! ..

ಪಯಣದ ಕಷ್ಟದಿ
ಇಬ್ಬರೂ ಪಾರಾದೆವು ..

ಬಿದ್ದೆವು .. ಮೇಲೆದ್ದೆವು
ಜೊತೆ ಜೊತೆಯಲೇ ಇದ್ದೆವು ..

ಅಪ್ರತಿಮ ಪ್ರೀತಿ ನಿನ್ನ ಮೇಲೆ
ಆಗಸಕ್ಕೆ ಕೊಂಚ ಮೆಟ್ಟಿಲಷ್ಟೆ

ಅಮೃತದಷ್ಟೇ ಶುದ್ದ
ಗೌರವದ ಸದ್ಭಾವನೆ

ಮೊದಲು ಜನಿಸಿ ನೀ ಜಪಿಸಿದ್ದೇ
ನಂಗೆ ನೀನು ಸಿಗಲು ಕಾರಣ

ಅದಕ್ಕೆ ಎಂದೆಂದಿಗೂ ಧನ್ಯ ..
ನಿನ್ನಿಂದಲೇ ನಾನು ಅಧಮ್ಯ ..

- ಅಮರ ಕೆ ಜಿ ಕಾನುಗೋಡು 

ಮೌನ ಬಳ್ಳಿ


ನವೀನ ಸೂರ್ಯನ  ಮುಂಜಾವಿಗೆ
ಕೈದಾವರೆಗೆ ವಿಸ್ಮಯ ಕಿರುನಗೆ

ಮಾತೆಲ್ಲ ಪುಳಕಿತ ಸೃಷ್ಟಿಗೆ .
ನಸುಗೆಂಪು ಕಣ್ಣೀರು ಜಾರಿದ ಕಲಶಕೆ

ಅದೆಲ್ಲಿ  ಹುಡುಕಿತು ಸೃಷ್ಟಿ ನಿನಗೆ
ಕುಲ ಬೆಳಗುವ ಕಣ್ಣೊಟವ ..

ಅಲ್ಲೇ ಮಲಗಿದ  ನನಗೆ ..
ಮತ್ತೆಲ್ಲೋ ಕರೆದ ಜೋಂಪು ..

ನೀ ಕೈ ಇಟ್ಟ ಗಲ್ಲಕೆ ..
ಬಿಸಿ ಮುತ್ತೇ ಬೇಡ ..

ಕಣ್ಮುಚ್ಚಿ ಕೇಳಿದ ಆ ನಿನ್ನ ಸ್ವರ ..
ಅದೆಲ್ಲೋ ಕೊಳಲ ನಾದದ ಇಂಪು ..

ಮೆಲುಕು ಹಾಕಿತು ಮನ
ಮತ್ತೊಮ್ಮೆ ನಿನ್ನ ನೆನಪ ..

ಇರಬಾರದಿತ್ತೆ ನನ್ನ ಕಣ್ಣಂಚಿನಲಿ
ಆ ನಿನ್ನ ಬಿಸಿ ಸ್ಪರ್ಶ ..

ಹೃದಯಕ್ಕೆ  ಅದೆಷ್ಟು ವಿಸ್ಮಯ ..
ಆ ನಿನ್ನ ಪ್ರತೀ ಕರೆಗೆ ..

ವಿದ್ಯುತ್ ಪ್ರವಾಹ ನರ ನಾಡಿಗೆ ..
ನೀ ಕರೆದ ನಾದ ಧ್ವನಿ ಸುರುಳಿಗೆ ..

ಸೋತೆ ನಾನು ನಿನ್ನಮ್ಮಗೆ ..
ನನಗೆ ಕೊಟ್ಟ 'ನೀನೆಂಬ' ಬಹುಮಾನಕೆ!!

ಅಪ್ಪ ಎಂಬ ಆ ನಿನ್ನ ಕರೆ
ಒಳ ಅಂತರಗದ ಶುದ್ದ ಗೆರೆ..

ಅದೇನನಿಸಿತೋ ಆ ಸ್ರುಸ್ಟಿಕರ್ತನಿಗೆ
ನನಗಾಗಿ ನೀಡಲು ನಿನ್ನ ಕೆಲ ಕಾಲಕೆ ..

ಎಲ್ಲಿದ್ದರೇನು ಹೇಗಿದ್ದರೇನು
ನಂಗೆ ನೀನು ಅದೇ ಮೌನ ಬಳ್ಳಿಯ ಮಗಳೇ ..


- ಅಮರ ಕೆ ಜಿ ಕಾನುಗೋಡು

Wednesday, December 9, 2015

ನೀಬಾರೆಯ ಮತ್ತೆ ? ನನಗಾಗಿ ..


ನನ್ನೆಲ್ಲ ದೇಹ ಬಡಿತ..   ನೀನಲ್ಲ,  'ಕನಸು' ಎಂದು ತಿಳಿದರೂ ..
ಕೆಲವೊಮ್ಮೆ ನೀನು ನಿಜವೆಂದು ನಂಬಿದ್ದೆ ..
ಕನಸಿನ ಹೃದಯಕೆ ಒಲುಮೆಯ  ಪ್ರೀತಿಯು  ಎಂದಿಗೂ  ವಿಯೋಗ ..
ಎಲ್ಲ ಕಳೆದುಕೊಂಡ ಏಕಾಂಗಿ ಆತ್ಮದ ಕಲ್ಪನೆ ..
ಆ ಎಲ್ಲ ವೈಭವದ ದಿನಗಳು ಅತಿರೇಕದ ಸ್ಪಷ್ಟನೆ ..
ನಿನ್ನಾ ಮೃದು ಸ್ಪರ್ಶ ನನ್ನ ಭಾವನೆಯ ಕೆದಕಿವೆ ..
ನಿನ್ನಾ ತುಟಿಗಳ ಸಿಹಿರುಚಿ ಕೋಲ್ಮಿಂಚ ಬೆಳಗಿವೆ
ನಿನ್ನಾ ಹೃದಯ ಬಡಿತ ನನ್ನ ಹೃದಯವ ಹಿಡಿದಿವೆ ..
ನಿನ್ನಾ ಬಿಸಿಯುಸಿರು ಬೆವರ ಕತ್ತ ಚರ್ಮವ ತಣಿಸಿದೆ..
ಪ್ರೇಮಿಗಳಂತೆ ಹಿಡಿದಪ್ಪಿವೆ  ನಿನ್ನಾ  ಕೈ ಬಲ ..
ಆಗಲೇ  ದಿಟ್ಟಿಸಲು -ನಿನ್ನ- ಈ ಕಣ್ಣ ತೆರೆದೆ, ಆದರೆ ನೀನಿಲ್ಲವಲ್ಲ ಅಲ್ಲಿ ..
ಕನಸಲ್ಲೇ ಮರೆಯಾದ ಮರೀಚಿಕೆಯಾದೆ ...
ನೀನು ನಿಜವಲ್ಲವೆಂದರಿತಾಗ .. ಕಣ್ಣಿನಲ್ಲಿ ಕನಸಿಲ್ಲದ ಕಣ್ಣೀರು !!!
ಉದ್ವೇಗದ ರಕ್ತದ ಚಲನೆ ..
ಮತ್ತೊಮ್ಮೆ ನನ್ನ ಹೃದಯ ಬರಿದು .. ಆತ್ಮ ಒಬ್ಬೊಂಟಿ ..
ಮತ್ತೊಮ್ಮೆ ಕನಸಿಗೆ ಜಾರುವ ತವಕ ..
ಕನಸೆಲ್ಲ ನನಸಾಗುವ ಆಸೆಯ ಕುಹುಕ ..

ನೀ ಬಾರೆಯಾ ಮತ್ತೆ .. ಕೇವಲ ನನಗಾಗಿ ..

- ಅಮರ ಕಾನುಗೋಡು

Thursday, September 6, 2012

ಮರೆಮಾಚು ...


ಅದವಳ ಶಾಲೆಯ ಮೊದಲನೇ ದಿನ ...
ಅಪ್ಪನೊಡೆ ಕೈಬೆರೆಳ ಹಿಡಿದು ಹೊರಟ ದಿನ
ಅವನಿಗೆ ಹೆಮ್ಮೆಯಾದರೂ ಇಬ್ಬರಲ್ಲೇನೋ ದುಗುಡ ದುಃಖ!!
ಪುಟ್ಟ ಮಗಳೋಡೆ ಪ್ರೀತಿಯ ಅಪ್ಪಾಜಿ ...
ಇನ್ನೇನು ಮಗಳ ಬಿಟ್ಟು ಬರುವ ಸಮಯ ..
ನನ್ನ ಬಿಟ್ಟು ಹೋಗದಿರು ಅಪ್ಪ!! ..
ಕಣ್ಣಿರಿನ ಹೊಳೆಹರಿಯೆ ನಾನೊಬ್ಬಳೆ ಹೇಗಿರುವದೆಂಬ ದುಗುಡ
ನಾನಿಲ್ಲಿರಲಾರೆ ಒಬ್ಬಳೇ ಬಿಡದಿರು ನನ್ನ ಇಲ್ಲಿ
ಕಣ್ಣೊರೆಸಿ ಸಮಾಧಾನಿಸಿದಾತ ಮರೆಮಾಚಿ ತನ್ನ ಕಣ್ಣೀರ ..
ನಾವಿಬ್ಬರೂ ದೂರವಿದ್ದರೂ ನಾ ನಿನ್ನೋಳಗಿರುವೆ
ನಾನಿಲ್ಲೇ ಇರಲು ಅಸಾದ್ಯವೇನೋ ..

ಅದವಳ ಮದುವೆಯ ದಿನ ..
ಮುದ್ದು ಮಗಳ ಹೊರಟ ಗಳಿಗೆ ಅದೆಸ್ಟು ಅಹಿತ ಅವಗೆ ..
ಆ ದಿನದ ಅವಳಲಂಕಾರ ಅವನೆಂದೂ ನೋಡಿಲ್ಲ ..
ಆದರೂ ಅವಳ ರೂಪವ ಬಲ್ಲವ ಅವನು ..
ಹೋಸಜೀವನದೊದೆ ಹೊರಟೊಡೆ ಮಮತೆಯ ಭಾಷ್ಪ ..
ಆನಂದ ಬಾಷ್ಪದಲ್ಲಿಯೂ ದೂರವಾಗುವಿಕೆಯ ಕಣ್ಣೀರ ಹನಿ ಅವನಲ್ಲಿ ..
ಅವಳು ದುಗುಡದ ಕಣ್ಣೀರನ್ನು ಗಮನಿಸುತ್ತಾಳಂದು..
ಕಣ್ಣೊರೆಸಿ ಸಮಾಧಾನಿಸಿದಾಕೆ ಮರೆಮಾಚಿ ತನ್ನ ಕಣ್ಣೀರ ..
ನಾವಿಬ್ಬರೂ ದೂರವಿದ್ದರೂ ನಾ ನಿನ್ನೋಳಗಿರುವೆ ..
ನಾನಿಲ್ಲೇ ಇರಲು ಅಸಾದ್ಯವೇನೋ ..

ಅವನ ಕೊಟಡಿಗೆ ಬಂದವಳು ಅವನ ಹಣೆಗೊಂದು ಮುತ್ತಿಟ್ಟು ..
ಅವನ ಹಾಸಿಗೆಯ ಬಲಕ್ಕೆ ಕೂರುತ್ತಾಳಂದು..
ಅವನ ಕೊನೆ ಗಳಿಗೆಯ ಆಸ್ಪತ್ರೆಯ ಹಾಸಿಗೆ ಅದು ...
ಅವಳ ಕೈ ಹಿಡಿದು ಬಿಗಿಯಾಗಿ ಅಪ್ಪಿತ್ತು..
ಅವನಿಗೆ ಶಕ್ತಿಬರಲೆಂಬ ಮಹದಾಸೆ ಅವಳದ್ದು ..
ಬೆಳೆದಾ ಮಗಳೋದೆ ಮರಣದ ಹಾಸಿಗೆಯಲ್ಲಿ ಹೆಮ್ಮೆಯ ಅಪ್ಪಾಜಿ ...
ಚಿಮ್ಮಿದ ಕಣ್ಣೀರಿನ ಜೊತೆ ಅಪ್ಪ ನನ್ನ ಬಿಟ್ಟು ಹೋಗದಿರೆಂಬ ಬಯಕೆ ..
ನಾನಿನ್ನ ಕಳೆದುಕೊಳ್ಳುವನೆಂಬ ದುಗುಡ ...
ಕಣ್ಣೊರೆಸಿ ಸಮಾಧಾನಿಸಿದಾತ ಮರೆಮಾಚಿ ತನ್ನ ಕಣ್ಣೀರ ..
ನಾವಿಬ್ಬರೂ ದೂರವಿದ್ದರೂ ನಾ ನಿನ್ನೋಳಗಿರುವೆ
ನಾನಿಲ್ಲೇ ಇರಲು ಅಸಾದ್ಯವೇನೋ ..

-- ಅಮರ ಕೆ ಜಿ , ಕಾನುಗೋಡು


ಉಸಿರಾಟದ ಒಲುಮೆಯ ಚಿಲುಮೆ ..

ನಾನಸ್ಟೆ ಅವೆರಡು ಸಂವತ್ಸರವ ಕಳೆದಿದ್ದೆ ..
ನನ್ನ ಹೆತ್ತಾತ ದೂರಾಗಿದ್ದ ..
ನನ್ನನ್ನೆಂದಿಗೂ ಪ್ರೀತಿಸುವ ಪ್ರಮಾಣಿಸಿದ್ದ ..
ಅದರೇನು.. ತಾನಿರಲು ಸಾದ್ಯವಿಲ್ಲೆಂದ ...
ದಿನಗಳು ವಾರಗಳಾದವು
ವಾರ ಮಣಿಗಳ ಮಾಲೆ ಮಾಸಗಳಾದವು ..
ಮಾಸಗಳ ತುದಿ ಮೊದಲು ವರುಷಗಳ ಕಳೆದಿತ್ತು ...
ನನ್ನ ಕನಸ ಆ ಅಪ್ಪನ ಕಾಣಲೇ ಇಲ್ಲ !! ..
ನನ್ನಾ ಕಣ್ಣೀರನ್ನ ವರೆಸಲು ಆತನಿರಲಿಲ್ಲ .. ..
ನನ್ನ ಮಲಗುವ ನಿದ್ದೆಗೆಂದೂ ಆತನ ಕಟ್ಟುಕತೆ ಮುದ್ದಿಸಲಿಲ್ಲ !!
ನನ್ನಾ ಹುಟ್ಟುಹಬ್ಬಕೆ ಆತನ ಕಾಣಿಕೆಗಳೆಲ್ಲಿ?
ಅದರೇನು ಪ್ರತಿ ಹಬ್ಬಕೂ ನನ್ನಲ್ಲಿ ಆತನ ನಿರೀಕ್ಷೆ ...
ನನ್ನ ಶಾಲೆಯ ಮೊದಲದಿನವ ನೋಡಲಿಲ್ಲ ಅವನು ..
ನನ್ನ ಶಾಲಾ ಜೀವನವ ಕೆದಕಲ್ಲಿಲ್ಲ ಕೊನೆಗೂ ...
ನಾನೆಸ್ಟು ಚತುರ ತಿಳಿಯದಾತ!! ...
ನನ್ನ ಅಂಕಪಟ್ಟಿಯಲ್ಲಿ ಎಲ್ಲದರಲ್ಲೂ ನಾಪಡೆದ 'A'
ಕೆಲವೊಮ್ಮೆ ನಾನವಗೆ ಕರೆಮಾಡುವಾಸೆ ..
ನಾನಿನ್ನೂ ಬದುಕಿರುವೆಂಬುದ ತಿಳಿಸುವ ತವಕ ..
ನಾನಿನ್ನೇನು ಹದಿನೆಂಟು ದಾಟುವೆ ...
ನಾ ಕಲಿಯಬೇಕೆಂಬ ಕಾರನ್ನು ಕಲಿಸುವ ಅವನೆಲ್ಲಿ?
ನಾ ಹೋಗುವ ಉನ್ನತ ಶಿಕ್ಷಣಕೆ ಆತನ  ಉಸಿರ ಬಯಕೆ ...
ನಾ ನನ್ನಾ ಬವಿಷ್ಯದೆಡೆ ತವಕಿಸುತ್ತಿರುವೆ... 
ಅದರೂ ಕಳೆದ ದಿನಗಳ  ಮಿಸುಕಾಡುತಿರುವೆ ...
ಊಹೆಗೂ ಮೀರಿ ನಾನೇನು ತಪ್ಪೆಸಗಿರುವೆ ?
  ಊಹೆಗೂ ಮೀರಿ ನಾನೇನು ತಪ್ಪೆಸಗಿರುವೆ !!?
ನನ್ನಾ ಪೋಷಕರು ವಿಚ್ಛೇದನ ಗೊಂಡಿದ್ದಾರಷ್ಟೇ ...
ಆದರೆ ಆದರೆ ...
  ನಾನು ಆತನ ಕಳೆದುಕೊಂಡೆ !!  
ಉಸಿರಾಟದ ಒಲುಮೆಯ ಚಿಲುಮೆಯ ನಾ ಪದೆಯದಾದೆ ...
ಅವರಿರ್ವರ ಜಗಳಕೆ ಕೂಸು ಬಡವಾಯಿತೇನೋ!!


Monday, December 13, 2010

ಕಿಶೋರರು - ಈ ವಯಸ್ಸೇ ಹೀಗೆ . . . . .



ಕ್ಷಣ ಕ್ಷಣವೂ ಸಡಗರ . .
ಮುಂದೇನೆಂಬುದರ ಹಂಬಲ . . .
ಕಿಲ ಕಿಲನೆ ಹೊರಡುವ ಆ ನಗೆಗೆ ...
ಕೊನೆಬಿಂದು ಎಲ್ಲೆಂಬುದರ ಕಳವಳ ...
ಈ ವಯಸ್ಸೇ ಹೀಗೆ -- - -
ಮೊಂಡತನ ಭಂಡತನದ ನಡುವೆ ,
ಆಲಿಂಗತನದ ಆಸೆ ... ದುರಾಸೆ !. .
ಕಾಮದ ಕಿಲಾಡಿತನಕ್ಕೆ ಜೀವತುಂಬುವಾಸೆ . .
ಕಾಮಿನಿಯರ ಕಣ್ಣಿಗೆ ಕಣ್ಣಿಟ್ಟು ನೋಡುವಾಸೆ . .
ಕುಡಿಮೀಸೆಯ ಆಸೆಗೆ ತಾಳ ಹಾಕುವಾಸೆ .!.
ಈ ಎಲ್ಲ ಹುಡುಗಾಟದಂಚಿಗೆ . . . . .
ಸಮಾಜದಲ್ಲಿ ಬೆಳೆಯುವಾಸೆ ... ಬೆಳಗುವಾಸೆ ...
ಮುಂದೇನೆಂಬುದರ ಪ್ರಶ್ನೆಗೆ
ಉತ್ತರ ಹುಡುಕುವ ಜಿಜ್ಞಾಸೆ .. ... ....
ಈ ವಯಸ್ಸೇ ಹೀಗೆ .. .. ..
ಆಸೆಗಳ ನಡುವೆಯೂ ಪ್ರಶ್ನೆಗಳ ಉತ್ಪ್ರೇಕ್ಷೆ . . .
ಜಗತ್ತಿನೆಲ್ಲವನ್ನೂ ಕನಸು ಕಾಣುವ ಶಕ್ತಿ !
ಕನಸನ್ನೆಲ್ಲವ ನನಸಾಗಿಸುವ ಪ್ರಚಂಡ ಯುಕ್ತಿ !! .
ಸ್ವಂತ ಶಕ್ತಿಯಲ್ಲಿ ಈ ವಯಸ್ಸಿಗೆ
ಹೃದಯ ಪೂರ್ವಕ ಭಕ್ತಿ !.
ಈ ವಯಸ್ಸೇ ಹೀಗೆ ... ಈ ವಯಸ್ಸು ಹೀಗೆಯೇ .. .
----' ಅಮರ ಕಾನುಗೋಡು ಗಣಪತಿ '

Thursday, December 9, 2010

ನಿಜ ಜೀವನ ತುದಿಗೇರಿ ಬಂದು . .



ಹಸ್ತಾವಲಾಘನ ಆತ್ಮಾವಲಾಘನ ಎರಡರ ವ್ಯತ್ಯಾಸ ತಿಳಿದೊಡೆ
ನೀನಿರುವೆ ಮಾರ್ಮಿಕಥೆಯ ಹಾದಿಯಲಿ ...
ನೀ ತಿಳಿಯುವೆ ,
ಪ್ರೀತಿ ಕೇವಲ ಲೀನವಾಗುವಿಕೆಯಲ್ಲ ..
ಒಂದೆಡೆ ಸೇರುವಿಕೆ ಕೇವಲ ರಕ್ಷಣೆಗಾಗಲ್ಲ . . .
ನೀನಿಡುವ ಮಧುರ ಚುಂಬನ ಕೇವಲ ಗುರುತಿಗಲ್ಲ ..
ನೀಕೊಡುವ ಆ ಅಂಗಚಿತ್ತ ಕೇವಲ ಒಡಂಬಡಿಕೆಯಲ್ಲ ..
ನೀ ತಲೆ ಎತ್ತಿ ಕಣ್ಬಿಟ್ಟು ಒಪ್ಪಿದ ನಿನ್ನ ತಪ್ಪುಗಳು ಕೇವಲ ಉದ್ವಿಘ್ನತೆಯ ಮಗುವಿನ ತಾರಕವಲ್ಲ...
ಅನಿಶ್ಚಿತತೆಯ ನಾಳೆಯ ಹಸಿರಂಗಳಕ್ಕೆ ನೀ ನಿಂದು ಹುಡುಕಿದ ಹಾದಿಯಲ್ಲಿ
ಸೂರ್ಯೋದಯದ ಬೆಳಗೂ ಕೆಲವೊಮ್ಮೆ ಸುಡುವಂತೆ ಭಾಸವೋ .. ..
ನಿನ್ನಾತ್ಮವ ಶೃಂಗರಿಸಿ , ಬೇರೊಬ್ಬರು ಹೂವು ಕೊಡುವ ಮುನ್ನ , ಉದ್ಯಾನ್ನವ ಚಿಗುರೊಡೆಸು ..
ನೀ ನಿನ್ನ ನಂಬು .. ನಿನ್ನ ಒಳ್ಳೆಯತನವ ಚಿಮ್ಮು ...
ಕಾರಣ ನೀನೆಂದೂ ಪರರ ಕ್ಷಮಿಸಬಲ್ಲೆ ..
ಜೀವನದ ತುದಿಗೇರಿ ಬಂದ ನೀನು ನಿಜಕ್ಕೂ ಪ್ರಭುದ್ದ . . .
ನೀ ನಿಜಕ್ಕೂ ವಾಸ್ತವತೆಗೆ ಪ್ರತೀಕ ..

- ಅಮರ್ ಕಾನುಗೋಡು ಗಣಪತಿ

Saturday, March 6, 2010

ಜೀವನ ಪಯಣ


ಸಂತಸವು ಸದಾ ತುಂಬಿಂಪು . . .
ಹೃದಯ ಹಾಡಿತು .. ಪಾದ ನರ್ತಿಸಿತ್ತು ...
ಮನಸ್ಸೇ ಗಾಳಿಯಲ್ಲಿ ತೇಲಾಡಿತು ..
ಪ್ರಪಂಚ ಹಗುರಾಗಿ ಮೇಲು ಗಾಳಿಗೆ ತೂರಾಡಿತು ...
ಸಂತಸದ ತಾಳಕ್ಕೆ ಈ ಭೂಮಿ ಗೆಜ್ಜೆಯ ಮೀಟಿತು ...
ಆ ನೀರ ತುದಿಗೆ ಆಗಸ ಚುಂಬಿಸಿತು ..
ಕೊಗಿಲೆಯೇನೋ ಮೈ ಮರೆಯಿತು ..
ಪದಗಳ ಕಾಣದ ಕೊಳಲು ಪದಗುಂಜಕೆ ಕಸಿವಿಸಿಯಿಟ್ಟಿತು ..
ಸಂತಸವು ಸದಾ ತುಂಬಿಂಪು !!

- ಅಮರ ಕಾನುಗೋಡು ಗಣಪತಿ