ಸೃಷ್ಟಿಯ ಆಸೆಯಲ್ಲಿ ಅಪ್ಪನಿಗೆ ತನ್ನ ಮಗಳನ್ನು ಕಂಡರೆ ಅದೇನೋ ವಿಶೇಷ ಮಮತೆ. ಯಾರ ಮಾತಿಗೂ ಬಗ್ಗದ ವ್ಯಕ್ತಿತ್ವ ಮಗಳ ಮಾತಿಗೆ ಮೌನ !! . ಸಿಟ್ಟು ಬಂದಾಗ ಮಗಳಿಗೆ ಸ್ವಲ್ಪ ಸಿಡುಮಿಡುಸಿದರೂ ಒಳಗೊಳಗೇ ಮಗಳಿಗೆ ಸಿಡುಕಿದೆನೆಂಬ ದೋಷಿತನ.
ಮಗಳು ಹುಟ್ಟಿ , ಪುಟ್ಟ ಪುಟ್ಟ ಹೆಜ್ಜೆಯ ಗೆಜ್ಜೆಯ ಝೇಂಕಾರಿಸಿ ಮೆದು ಮೃದುವಿನ ಆ ಗೊಜ್ಜ ನುಡಿಯ ಸರಿದೂಗಿಸಿ ಇಂಪಾಗಿ ' ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ ' ಎಂಬಷ್ಟರಲ್ಲಿ ಆ ಹದಿನಾರರ ದಿನಗಳ ದಾಟಿ ಆಗ ತಾನೇ ಅರಳುತ್ತಿರುವ ಕೆಂಪು ಕಮಲದ ಪ್ರತೀಕವಾಗಿರುತ್ತಾಳೆ. ಅಪ್ಪನಿಗೆ ನನ್ನ ಮುದ್ದು ಅದೆಷ್ಟು ಬೇಗ ನನಗೆ ತಿಳಿಯದೆ ಬೆಳೆದಳೆಂಬ ಆನಂದ ಭಾಷ್ಪ ಜೊತೆಗೆ ನಾನೆಷ್ಟು ದುಡಿದರೂ ನನ್ನ ಚಿನ್ನು ನನ್ನ ಮನೆಯಲ್ಲಿ ತನ್ನ ಅದೆಷ್ಟು ದಿನ ನಲಿದಿರಬಹುದೆಂದು ಆಲೋಚಿಸೆ , ಕಂಠ ಒತ್ತಿಬಂದಂತಾಗಿ ಹೃದಯದಾಳದಿಂದ ಉಕ್ಕಿ ಬರುವ ದುಖ್ಖ ಬಹಳ ದಿಗಂತದಷ್ಟು ವಿಚಾರವನ್ನು ಆವರಿಸಿರುತ್ತದೆ. ಮಗಳಿಗಾಗಿ ಅವಳನ್ನು ಸಂತೋಷಿಸಲು ಕೇವಲ ಎರಡೇ ಹಬ್ಬ , ಅವಳ ತವರು ಮನೆಯ ಜೀವನದಲ್ಲಿ. ಒಂದು ನಾನು ನಿಮ್ಮನೆಯಲ್ಲಿ ಜನಿಸುತ್ತಿದ್ದೀನೆಂಬ ಹುಟ್ಟು ತೊಟ್ಟಿಲ ಹಬ್ಬ ಆನಂತರ ಈ ಹುಟ್ಟಿ ನಲಿದು ಬೆಳೆದ ಅವಳು ಮನೆಯನ್ನ ಬಿಟ್ಟು ಹೊರಡುತ್ತಿದ್ದೀನೆಂಬ ಸೂಚಕದ ಆ ಹೊಸ ಜೀವನದ ಮದುವೆಯ ಹಬ್ಬ. ಮೊದಲ ಹಬ್ಬದಲ್ಲಿಯೂ ಒಬ್ಬರ ಕೈಯಿಂದ ಮತ್ತೊಬ್ಬರ ಕೈಗೆ ದಾಟಿಸುವಾಗ ನೋವಿನ ಅಳು .. ಎರಡನೆಯ ಆ ಮದುವೆಯ ಹಬ್ಬದಲ್ಲಿಯೂ ಬೇರೊಬ್ಬರ ಕೈ ಸೇರುತ್ತೇನೆಂಬ ಅಂತರಾತಂಕದ ನೋವಿನ ಅಳು !! . ಇವೆರಡರ ನಡುವೆ ಮನೆಯಲ್ಲಿ ನಡೆಯುವ ತಮ್ಮನ ಚೌಲ ಉಪನಯನಾದಿ ಕಾರ್ಯಕ್ರಮಗಳಲ್ಲಿ , ಆ ಹೊಳೆಯುವ ಉದ್ದ ಲಂಗ ತೊಟ್ಟು , ಬಂದವರಿಗೆಲ್ಲ ಊಟದ ನಂತರ ಅಡಕೆ ಪುಡಿಯನ್ನ ಚಮಚದಲ್ಲಿ ನೀಡಿ , ಅದೆಲ್ಲೋ ಮೂಲೆಯಲ್ಲಿ ಕುಳಿತು ಸ್ವಲ್ಪ ಊಟ ಮಾಡಿ , ಬಂದ ಗೆಳತಿಯರೊಡೆ ಎಡಗೈಲಿ ಆ ಉದ್ದ ಲಂಗವ ಹಿಡಿದು ಬಲಗೈ ಮೇಲೆತ್ತಿ ಒಂಟಿಕಾಲಿನಲ್ಲಿ ಕುಂಟ್ಯಾಲಿಪ್ಪಿ ಅಡಿ ಮೈ ಮರೆತು ಸಂತೋಷ ಪಟ್ಟ ದಿನಗಳು ಈ ಮದುವೆಯ ದಿನ ಇಲ್ಲಿಯವರೆಗೂ ಕಾಣದ ಆ ಪತಿಯೊಡನೆ ಹೊರಟು ಒಮ್ಮೆ ತಿರುಗಿ ನಿಂತು ಮನೆಯನ್ನು ಕಣ್ಬಿಟ್ಟು ನೋಡಿದಾಗ ಆ ಅಂತರಾತ್ಮಕ್ಕೆ ಇಲ್ಲಿಯವರೆಗೆ ನಡೆದದ್ದೆಲ್ಲ ಕನಸೇನೋ ಎನ್ನುವ ಭಾಸದ ಕಣ್ಣೀರನ್ನು ನೋಡಿ ಆ ಕಂದನನ್ನ ದಾರೆಯೆರೆಯುವ ಅಪ್ಪ ಹೇಗೆ ತಾನೇ ಖುಷಿಯಿಂದಿರಲು ಸಾಧ್ಯ? ಅವನ ದುಖ್ಖವನ್ನ ಬಹುಶಯ ಯಾರೂ ಗಮನಿಸಲು ಸಾಧ್ಯವಿಲ್ಲ . ಅಪ್ಪನ ಸ್ಥಾನವೇ ಹಾಗೆ . ಸಂತೋಷವನ್ನ ಮಾತ್ರ ಹಂಚಿಕೊಂಡು ದುಖ್ಖಃವೇನಿದ್ರೂ ತಾನೊಬ್ಬನೇ ನುಂಗುವ ಆಕಸ್ಮಿಕ ಜೀವನದ ಒಂದು ಅಪರೂಪದ ಪಾತ್ರ . ಈ ಸಮಯದಲ್ಲಿ ಆ ಮುದ್ದು ಮಗಳು 'ಅಪ್ಪ ನಾನು ಬರುತ್ತೇನೆ .. ಹೋಗಿಬರುತ್ತೇನೆ ' ಎಂದಲ್ಲಿ ಅದೇ ಅಪ್ಪನಿಗೆ ತನ್ನ ಕೊನೆ ಕ್ಷಣದಲ್ಲಿ ಲೋಕವನ್ನು ಬಿಟ್ಟು ಹೊರಡುವ ದಿನದ ಅನುಭವ ಅಲ್ಲಿಯೇ ಆಗಬಹುದೇನೋ . ಹೃದಯದ ಸ್ವಲ್ಪ ಕೆಳಭಾಗ ಉದರದ ಸ್ವಲ್ಪ ಮೇಲ್ಭಾಗ ತಣ್ಣನೆಯ ಕೆಟ್ಟ ಅನುಭವ ಕಣ್ಣೀರನ್ನು ಚಿಮ್ಮಿಸುತ್ತದೆ.
ಅಪ್ಪನ ಸ್ಥಾನದಲ್ಲಿ ನಿಂತ ಅವನು ತನ್ನ ಮಗಳು ಹೊಸ ಮನೆಗೆ ಕಾಲಿಟ್ಟು , ಆ ಕುಟುಂಬದ ಮನ ಗೆದ್ದು ಆ ಮನೆಯ ರಥವನ್ನು ಯಾವುದೇ ತೊಡಕಿಲ್ಲದೆ ನಡೆಸಿದಾಗ , ಪತಿ ಮನೆಯ ಪ್ರತಿ ಶ್ಲಾಘನೆಗಳು ' ನನ್ನ ಹೆಮ್ಮೆಯ ಮಗಳು ' ಎಂದು ಹೇಳುವದರೊಂದಿಗೆ ತನ್ನ ಹೃದಯವಂತಿಕೆಯನ್ನು ಇಮ್ಮುಡಿಗೊಳ್ಳಿಸುತ್ತಾನೆ. ಮಗಳಿಗೂ ಕೂಡ ಅಪ್ಪ ಪ್ರಾತಃ ಸ್ಮರಣೀಯನೆ ...
ಅಬ್ಬ ಅದೆಂತ ಅದ್ಭುತ ಸಂಭಂದ . ತಂದೆಗೆ ಮಗಳಿಂದ ಅದೆಂತ ಅದ್ಭುತ ಅನುಭವ . ನಮಗನ್ನಿಸುತ್ತದೆ ಹೆಣ್ಣು ಎಂಬ ಸೃಷ್ಟಿ ಅಪ್ಪನ ಮಗಳ ಆ ಮಮತೆಯ ತಂಪಿನ ಇಬ್ಬನಿಯ ಸಂಬಂಧಕ್ಕಾಗಿಯೇ ಇರಬಹುದೇನೋ . . . .
- ' ಅಮರ ಕಾನುಗೋಡು ಗಣಪತಿ '
ಅಪ್ಪನ ಸ್ಥಾನದಲ್ಲಿ ನಿಂತ ಅವನು ತನ್ನ ಮಗಳು ಹೊಸ ಮನೆಗೆ ಕಾಲಿಟ್ಟು , ಆ ಕುಟುಂಬದ ಮನ ಗೆದ್ದು ಆ ಮನೆಯ ರಥವನ್ನು ಯಾವುದೇ ತೊಡಕಿಲ್ಲದೆ ನಡೆಸಿದಾಗ , ಪತಿ ಮನೆಯ ಪ್ರತಿ ಶ್ಲಾಘನೆಗಳು ' ನನ್ನ ಹೆಮ್ಮೆಯ ಮಗಳು ' ಎಂದು ಹೇಳುವದರೊಂದಿಗೆ ತನ್ನ ಹೃದಯವಂತಿಕೆಯನ್ನು ಇಮ್ಮುಡಿಗೊಳ್ಳಿಸುತ್ತಾನೆ. ಮಗಳಿಗೂ ಕೂಡ ಅಪ್ಪ ಪ್ರಾತಃ ಸ್ಮರಣೀಯನೆ ...
ಅಬ್ಬ ಅದೆಂತ ಅದ್ಭುತ ಸಂಭಂದ . ತಂದೆಗೆ ಮಗಳಿಂದ ಅದೆಂತ ಅದ್ಭುತ ಅನುಭವ . ನಮಗನ್ನಿಸುತ್ತದೆ ಹೆಣ್ಣು ಎಂಬ ಸೃಷ್ಟಿ ಅಪ್ಪನ ಮಗಳ ಆ ಮಮತೆಯ ತಂಪಿನ ಇಬ್ಬನಿಯ ಸಂಬಂಧಕ್ಕಾಗಿಯೇ ಇರಬಹುದೇನೋ . . . .
- ' ಅಮರ ಕಾನುಗೋಡು ಗಣಪತಿ '